ಪಾರ್ಸನ್ಸ್, ಟಾಲ್ಕಾಟ್
1902-1979. ಖ್ಯಾತ ಸಮಾಜ ಶಾಸ್ತ್ರಜ್ಞ. ಹುಟ್ಟಿದ್ದು ಕಾಲರ್ಯಾಡೋದಲ್ಲಿ. ಜರ್ಮನಿಯ ಹೈಡಲ್‍ಬರ್ಗ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿ, 1927 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕನಾಗಿ ಸೇರಿ, ಮುಂದೆ 1946. ರಲ್ಲಿ ಅಲ್ಲಿಯೇ ಸಾಮಾಜಿಕ ಸಂಬಂಧಗಳ ವಿಭಾಗದಲ್ಲಿ ಮುಖ್ಯಸ್ಥನಾದ. ಬಂಧುತ್ವ, ಸಾಮಾಜಿಕ ಸ್ತರವಿನ್ಯಾಸ, ರಾಜಕೀಯ ಚಳವಳಿ, ಸಾಮೂಹಿಕ ಸಂಪರ್ಕ ವೈದ್ಯಕೀಯ ಮತ್ತಿತರ ವೃತ್ತಿಗಳು ಇತ್ಯಾದಿ ಅನೇಕ ವಿಷಯಗಳ ಬಗ್ಗೆ ಕೊಡುಗೆ ಸಲ್ಲಿಸಿದ್ದರೂ ಈತ ಪ್ರಖ್ಯಾತನಾಗಿರುವುದು ತನ್ನ ಸಾಮಾಜಿಕ ಕ್ರಿಯಾಸಿದ್ಧಾಂತ. (ಸೋಷಿಯಲ್ ಆ್ಯಕ್ಶನ್ ಥಿಯರಿ) ದಿಂದಾಗಿ. ಇದಕ್ಕೆ ಸಾಮಾಜಿಕ ವ್ಯವಸ್ಥಾ ಸಿದ್ಧಾಂತ ಎಂಬ ಪರ್ಯಾಯ ನಾಮವೂ ಇದೆ.

ಅವನ ಸಿದ್ಧಾಂತದ ಸಾರ ಇಷ್ಟು. ಪ್ರತಿಯೊಂದು ಸಾಮಾಜಿಕ ಕ್ರಿಯೆ ಅಥವಾ ಸಂಬಂಧ ಒಬ್ಬ ಕರ್ತೃವಿನಿಂದ. (ಅ್ಯಕ್ಟರ್) ಉದ್ಭವಿಸುತ್ತದೆ. ಅವನು ವಸ್ತುಜಾÐನ, ಲಾಭ ಮತ್ತು ಹಿತಾಹಿತಜ್ಞಾನಗಳಿಗಾಗಿ ತನ್ನನ್ನು ಆವರಿಸಿರುವ ಭೌತಿಕ, ಸಾಂಸ್ಕøತಿಕ ಹಾಗೂ ಸಾಮಾಜಿಕ ಸಂಗತಿಗಳಿಂದ ಕೂಡಿದ ಸನ್ನಿವೇಶಕ್ಕೆ (ಸಿಚುಯೇಶನ್) ಪ್ರೇರಣಾಭಿಮುಖನಾಗಿರುತ್ತಾನೆ. ಸಾಮಾಜಿಕರಾದ ಕರ್ತೃಗಳು ಪರಸ್ಪರರ ಪ್ರತೀಕ್ಷೆಗಳನ್ನು ತಿಳಿದಿರಬೇಕು. ಹೀಗೆ ಅರಿತು, ನಿರಂತರವಾಗಿ ಪರಸ್ಪರರ ಹಾಗೂ ಸಮೂಹದ ಉದ್ದೇಶಗಳಿಗಾಗಿ ಸ್ಥಾಪಿತವಾಗುವ ಏರ್ಪಾಟಿಗೆ ಸಾಮಾಜಿಕ ವ್ಯವಸ್ಥೆ ಎನ್ನುತ್ತಾರೆ. ಇದರ ಅತಿ ಚಿಕ್ಕ ಘಟಕವೆಂದರೆ ವ್ಯಕ್ತಿ. ಇಂಥ ವ್ಯಕ್ತಿಗಳ ಸುಸಂಬದ್ಧ ವೃಂದಕ್ಕೆ ಸಾಮಾಜಿಕ ಸಂಸ್ಥೆ ಎನ್ನಬಹುದು. ಎಲ್ಲಾ ಸಮಾಜಗಳಲ್ಲಿ ಬಂಧುತ್ವ ಮೊದಲಾದ ಸಂಬಂಧ ನಿರ್ಧಾರಕ ಸಂಸ್ಥೆಗಳು ಆರ್ಥಿಕ, ರಾಜಕೀಯ ಮುಂತಾದ ನಿಯಂತ್ರಕ ಸಂಸ್ಥೆಗಳೂ ಸಾಮೂಹಿಕ ಕಾರ್ಯಚಟುವಟಿಕೆಗಳ ಮೂಲಕವಾಗಿ ಬಲಪಡಿಸುವ ಸಂಯೋಜಕ ಸಂಸ್ಥೆಗಳೂ ವಿಜ್ಞಾನ, ಧರ್ಮ, ಕಲೆ ಮೊದಲಾದ ಸಾಂಸ್ಕøತಿಕ ಸಂಸ್ಥೆಗಳು ಕಂಡುಬರುತ್ತವೆ. ಸಾಮಾಜೀಕರಣ ಮತ್ತು ಸಾಮಾಜಿಕ ನಿಯಂತ್ರಣಗಳ ಸಹಾಯದಿಂದ ಸಮಾಜ ವ್ಯವಸ್ಥೆ ಮುಂದುವರಿಯುತ್ತದೆ. ಸಾಮಾಜಿಕ ಕ್ರಿಯೆಗಳ ಕಾಲ ಹಾಗೂ ಆದ್ಯತೆಗಳನ್ನು ಲೆಕ್ಕ ಹಾಕಿ ವ್ಯವಸ್ಥಿತಗೊಳಿಸುವುದರಿಂದ ವ್ಯಕ್ತಿ ಹಾಗೂ ಸಮೂಹಗಳ ನಡುವಿನ ಸಂಘರ್ಷ ತಪ್ಪುತ್ತದೆ. ಇಲ್ಲಿ ಬಿರುಕುಂಟಾದರೆ ಸಾಮಾಜಿಕ ಪರಿವರ್ತನೆ ಪ್ರಾರಂಭವಾಗುತ್ತದೆ. ಇದು ಸ್ಥೂಲವಾಗಿ ಪಾರ್ಸನ್ನನ ನಿಲುವು. ಈ ಚೌಕಟ್ಟಿನಲ್ಲಿ ಆತ ಸಾಮಾಜಿಕ ಸಂಗತಿಗಳನ್ನು ವಿಶ್ಲೇಷಿಸುತ್ತಾನೆ. ಅವನ ದಿ ಸ್ಟ್ರಕ್ಚರ್ ಆಫ್ ಸೋಷಿಯಲ್ ಆ್ಯಕ್ಷನ್ ಮತ್ತು ದಿ ಸೋಷಿಯಲ್ ಸಿಸ್ಟಮ್ ಎಂಬ ಕೃತಿಗಳು ಒಳ್ಳೆಯ ನಿದರ್ಶನಗಳು. 

ಈಚೆಗಿನ ಸಮಾಜಶಾಸ್ತ್ರ ಸಿದ್ಧಾಂತಾಕಾರದಲ್ಲಿ ಪಾರ್ಸನ್ನನಿಗೆ ಮಹತ್ವದ ಸ್ಥಾನವಿದೆ. ಪ್ರಸಿದ್ಧ ಜರ್ಮನ್ ಸಮಾಜಶಾಸ್ತ್ಯಜ್ಞ ಮ್ಯಾಕ್ಸ್ ವೆಬರ್‍ನ ಬರಹಗಳನ್ನು ಪಾರ್ಸನ್ಸ್ ಭಾಷಾಂತರಿಸಿ ಪ್ರಚಾರ ಮಾಡಿದ. ಕಾಂಟ್, ಸ್ಪೆನ್ಸರ್ ಮತ್ತಿತರರು ಅಪೂರ್ಣವಾಗಿ ಉಳಿಸಿದ ಸಮಾಜ ವ್ಯವಸ್ಥಾ ಸಿದ್ಧಾಂತವನ್ನು ಮುಂದುವರಿಸಿದ ಕೀರ್ತಿಯೂ ಪಾರ್ಸನ್ನನದೆ. 1979ರ ಜೂನ್ ತಿಂಗಳಿನಲ್ಲಿ ತೀರಿಕೊಂಡ. 								 		  (ಎಚ್.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ